
 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯು.ಆರ್. ಅನಂತಮೂರ್ತಿಯವರು ತಮ್ಮ ಜೀವಿತಾವಧಿಯಲ್ಲಿ ಬರೆದ ಎಲ್ಲ ಕಥೆಗಳ ಸಂಗ್ರಹ ಇದು. ಹಿಂದೆ ಪ್ರಕಟವಾಗಿದ್ದ `ಐದು ದಶಕದ ಕಥೆಗಳು` ಸಂಕಲನದ ಎಲ್ಲ ಕಥೆಗಳ ಜತೆಗೆ, ಅಮೇಲೆ ಪ್ರಕಟವಾದ ಕಥಾಸಂಕಲನ ಮತ್ತು ಹಿಂದೆ ಅವರು ಬರೆದು ಪ್ರಕಟಿಸದೆ ಉಳಿಸಿದ್ದ ಕಥೆಗಳ ಸಂಗ್ರಹವೂ ಸೇರಿರುವುದರಿಂದ, ಈ ಸಂಗ್ರಹದ ಮೂಲಕ ಅನಂತಮೂರ್ತಿಯವರ ಸಮಸ್ತ ಕಥೆಗಳು ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ.
``...ಅನಂತಮೂರ್ತಿಯವರ ಪ್ರತಿಭೆ ಪ್ರಥಮವರ್ಗದ್ದು ಎಂದು ಈ ಸಂಕಲನ ಸಿದ್ಧಪಡಿಸುತ್ತದೆ. ಸೂಕ್ಷ ಬುದ್ಧಿ, ವಿಶಾಲವೂ ಪರಿಶುದ್ಧವೂ ಆದ ಅಭಿರುಚಿ, ಸಾಹಿತ್ಯ ವಿಚಾರಗಳಲ್ಲಿ ತೂಕವುಳ್ಳ ಮಾತನ್ನಾಡಬಲ್ಲಂಥ ಧೀರ ವಿಮರ್ಶ ಶಕ್ತಿ, ಕಲ್ಪನೆ, ಬಹುಶ್ರುತತ್ವ - ಇವು ಯಥೇಚ್ಛವಾಗಿರುವ ಈ ಲೇಖಕರಲ್ಲಿ ನನಗೆ ವೈಯಕ್ತಿಕವಾಗಿ ಹೇಳಬೇಕಾದರೆ ಸ್ನೇಹ ಮಾತ್ರವಲ್ಲ ಗೌರವವೂ ಉಂಟು. ಎಲ್ಲಕ್ಕಿಂತ ಹೆಚ್ಚಾಗಿ ಇವರಲ್ಲಿ ಕಂಡುಬರುವ ಆತ್ಮವಿಮರ್ಶ ಶಕ್ತಿ ದಂಗು ಬಡಿಸುವಂಥದು. ಅನಂತಮೂರ್ತಿಯವರ ಜೊತೆ ನಾನು ಕಾವ್ಯ ಸಾಹಿತ್ಯ ವಿಚಾರವಿನಿಮಯದಲ್ಲಿ ಅತ್ಯಂತ ಸಂತೋಷದಾಯಕವಾದ ಅನೇಕ ಗಂಟೆಗಳನ್ನು ಕಳೆದಿದ್ದೇನೆ. ಸಾಹಿತ್ಯ ವಿಷಯದಲ್ಲಿ ಇವರ ಅಭಿಪ್ರಾಯಗಳಿಗೆ ನಾನು ಬಹಳ ಬೆಲೆ ಕೊಡುತ್ತೇನೆ. ಇಂಥ ಲೇಖಕರ ವಿಷಯದಲ್ಲಿ ಒಂದು ಮಾತನ್ನು ಮಾತ್ರ ಧೈರ್ಯವಾಗಿ ಹೇಳಬಹುದು; ಇನ್ನೂ ಇನ್ನೂ ಉತ್ತಮವಾಗಿ ಇನ್ನಷ್ಟು ಶ್ರೀಮಂತ ಸಾಹಿತ್ಯವನ್ನು ಇವರು ಸೃಷ್ಟಿಸಬಹುದು; ಒಂದು ಪಕ್ಷ ಹಾಗಾಗದೇ ಹೋದರೂ ಈ ಲೇಖಕ ಸಾಹಿತ್ಯವಲ್ಲದ್ದನ್ನು ಎಂದೂ ಬರೆಯಲಾರ; ಯಾವ ಕೀರ್ತಿ ಪ್ರತಿಷ್ಠೆಯ ಆಕಾಂಕ್ಷೆಯಿಂದಲೂ ಅಪ್ರಾಮಾಣಿಕ ಕೃತಿರಚನೆಗೆ ಕೈ ಹಾಕಲಾರ. ಇಂಥ ಪ್ರಾಮಾಣಿಕ ಸಾಹಿತಿಗಳ ಸಂಖ್ಯೆ ಬಹಳ ಕಡಿಮೆ. ಅಂಥ ಕೆಲವೇ ಮಂದಿ ಕಲೆಗಾರರ ಪಂಕ್ತಿಯಲ್ಲಿ ಅನಂತಮೂರ್ತಿ ಆಗಲೇ ಸ್ಥಾನಗಳಿಸಿದ್ದಾರೆ. ಅಲ್ಲಿಂದ ಅವರಿಗೆ ಚ್ಯುತಿಯಿಲ್ಲ.``
|
ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
|
|
| |
|
|
|
|