|
|
|

| Rs. 750 | 10% |
Rs. 675/- | |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಜಾವಾಣಿಯ ಅಂಕಣಗಳಲ್ಲಿ ಪ್ರಸಿದ್ಧಿ ಪಡೆದು ನವಕರ್ನಾಟಕದಿಂದ ಪ್ರಕಟಗೊಂಡು ಕನ್ನಡಿಗರಿಗೆ ಸುಪರಿಚಿತವಾದ ಇಗೋ ಕನ್ನಡದ ಮೂರು ಸಂಪುಟಗಳು ಒಂದಾಗಿ ಇದೀಗ ಸಂಯುಕ್ತ ಸಂಪುಟವಾಗಿ ಹೊರಬರುತ್ತಿದೆ. ಪ್ರೊ||ಜಿ.ವಿ. ಅವರ ಅರಿವಿಗೆ ಎಲ್ಲೆಯೇ ಇಲ್ಲವೇನೋ ಎಂಬಷ್ಟು ಆಳವಾದ ಪಾಂಡಿತ್ಯಪೂರ್ಣ ವಿವರಣೆಯನ್ನೊಳಗೊಂಡು ಇವು ಕನ್ನಡಿಗರ ಮನಸೆಳೆದಿವೆ. ಜನರಿಂದಲೇ ಕೇಳಲಾದ ಪದಗಳಿಗೆ ವಿವರಣೆಯಿದ್ದು ಸಮಗ್ರ ಮಾಹಿತಿಯೊಂದಿಗೆ ಶಬ್ದ ಸಾಮ್ರಾಜ್ಯವನ್ನೇ ಸೃಷ್ಟಿಸಿ ಜನರ ಮೆಚ್ಚುಗೆ ಗಳಿಸಿದ ಹಿರಿಮೆಯೂ ಈ ನಿಘಂಟಿಗಿದೆ. ಪದದ ಮೂಲ, ವ್ಯುತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ, ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ - ಹೀಗೆ ಎಲ್ಲ ವಿವರಗಳ ಮಹಾಪೂರವೇ ಇಲ್ಲಿ ಹರಿದುಬಂದಿದೆ. ಇದು ಯಾರಿಗಾಗಿ ಎನ್ನುವುದಕ್ಕಿಂತ ಎಲ್ಲರಿಗಾಗಿ ಎಂಬುದೇ ಸೂಕ್ತವಾಗಬಹುದು.
|
ವಿದ್ಯ, ವಿದ್ವತ್ತು, ಸೃಜನಶೀಲ ಪ್ರತಿಭೆ ಮತ್ತು ವಿನಯಗಳಿಂದ ಕೂಡಿದ ಹಳೆಯ ತಲೆಮಾರಿನ ಸಾರಸ್ವತಲೋಕದ ವಿಶಿಷ್ಟ ಮಾದರಿಗೆ ಒಂದು ಜೀವಂತ ನಿದರ್ಶನ ಪ್ರೊ|| ಜಿ. ವೆಂಕಟಸುಬ್ಬಯ್ಯನವ್ರು. ವಂಶವಾಹಿಯಾಗಿ ವಿದ್ವತ್ತನ್ನು ಬಳುವಳಿಯಾಗಿ ಪಡೆದ ವೆಂಕಟಸುಬ್ಬಯ್ಯನವ್ರು ಸ್ವಂತ ಅಧ್ಯಯನ, ಬೋಧನೆ, ಸಂಶೋಧನೆಗಳಿಂದ ಗುಪ್ತಗಾಮಿನಿಯಾಗಿ ರಕ್ತದೊಳಗಿದ್ದ ಈ ಆಜ್ಯವನ್ನು ಹೊತ್ತಿಸಿ, ಪ್ರಜ್ವಲಿಸುವಂತೆ ಮಾಡಿ ಅದನ್ನು ಶಿಖೆಯಲ್ಲಿ `ವಿದ್ಯಾಲಂಕಾರ`ವಾಗಿ ಮುಡಿದವರು; ಸಾವಿರಾರು ಜನ ಶಿಷ್ಯರಿಗೆ ಸಾಹಿತ್ಯಪಿಪಾಸುಗಳಿಗೆ ಜ್ಞಾನದೀವಿಗೆಯಾದವರು. ವೆಂಕಟಸುಬ್ಬಯ್ಯನವರ ಪ್ರತಿಭೆಯ ಆಯಾಮಗಳು ಹಲವಾರು. ಈ ಸೃಜನಶೀಲ ಪ್ರತಿಭೆಗೆ ವಿದ್ವತ್ತಿನ ಸ್ಪರ್ಶವೂ ಕೂಡಿದಾಗ ಹಲವಾರು ಕುಡಿಗಳು ಕೊನರಿದವು. ಇಂಥ ಕುಡಿಗಳಲ್ಲಿ ಕನ್ನಡ ನಿಘಂಟು ದಾಂಗುಡಿ ಇಟ್ಟು ಒಂದು ಮಹಾವೃಕ್ಷವಾಗಿಯೇ ಬೆಳೆದು ಇಂದು ಕನ್ನಡಿಗರ ಮನೆಮನೆಗಳಲ್ಲಿ ಬೆಳಗುತ್ತಿದೆ. ಎಂ.ಎ. ಪದವಿಯಲ್ಲಿ ಸುವರ್ಣಪದಕ ವಿಜೇತರಾಗಿ ಕಾಲೇಜಿನಿಂದ ಹೊರಬಂದ ವೆಂಕಟಸುಬ್ಬಯ್ಯನ್ಬವರು ನಲವತ್ತು ವರ್ಷಗಳ ಕಾಲ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ದುಡಿದು ಅದಕ್ಕೆ ಹೆಗಲೆಣೆಯಾಗಿಯೇ ಕನ್ನಡ ನುಡಿಯ ಕೆಲಸಗಳಲ್ಲಿ ಅಹರ್ನಿಶಿ ಕ್ರಿಯಾಶೀಲರಾಗಿ ಯುವಪೀಳಿಗೆಗೆ ಮೇಲ್ಪಂಕ್ತಿಯಾಗಿ ನಿಂತವರು. ಕನ್ನಡ ನುಡಿಯ ಅರ್ಥ, ಅಂತರಾರ್ಥಗಳನ್ನು, ಅದರ ಆಜು-ಬಾಜುಗಳನ್ನು, ಆಳ-ವಿಸ್ತಾರಗಳನ್ನು ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ವೆಂಕಟಸುಬ್ಬಯ್ಯನವರು ಅಗ್ರಗಣ್ಯರು. ಚಲನಶೀಳವಾದ ಭಾಷೆಯ ಜೊತೆಗೇ ಲೇಖಕನಾದವನು ಬೆಳೆಯುತ್ತಾನೆ ಎಂಬುದಕ್ಕೆ ಸ್ಫಟಿಕಸದೃಶ ನಿದರ್ಶನ ವೆಂಕಟಸುಬ್ಬಯ್ಯನವರು. ಪ್ರತಿಭಾನ್ವಿತನ ಕೈಯಲ್ಲಿ ಎಷ್ಟು ಸಮರ್ಥವಾಗಿ ವಾಚ್ಯಾರ್ಥ ಧ್ವನ್ಯರ್ಥಗಳಿಂದ ಕೂಡಿ ಹೇಗೆ ಮಾತು ಮಾಣಿಕ್ಯವಾಗಬಲ್ಲದು ಎಂಬುದನ್ನು ಅಂಗೈನೆಲ್ಲಿಯಂತೆ ಸ್ಪಷ್ಟವಾಗಿ ತೆರೆದಿಟ್ಟು ಅವರು ನಿಮ್ಮನ್ನು ವಿಸ್ಮಯಗೊಳಿಸುತ್ತಾರೆ. ಎಂದೇ ಅವರ `ಇಗೋ ಕನ್ನಡ` ನಮ್ಮ ಅತ್ಯಂತ ಜನಪ್ರಿಯ ಅಂಕಣ. ಹದಿನೈದು ವರ್ಷಗಳಷ್ಟು ಹಿಂದಿನಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನುಡಿಮಾಲೆಯಾಗಿ ಕಂಗೊಳಿಸುತ್ತಾ ಸಹಸ್ರಾರು ಜನರ ಭಾಷಾಜ್ಞಾನದ ಎಲ್ಲೆಗಳನ್ನು ವಿಸ್ತರಿಸುತ್ತಿರುವ ಈ ಅಂಕಣದ ಬರಹಗಳು ಈ ಪುಸ್ತಕ ರೂಪದಲ್ಲಿ ಬಂದು ಕನ್ನಡಿಗರ ಮನೆಗಳನ್ನು ಅಲಂಕರಿಸಲಿರುವುದು, ಮನಗಳನ್ನು ಬೆಳಗಿಸಲಿರುವುದು ನಮಗೆ ಹೆಮ್ಮೆಯ ವಿಚಾರ, ಸಂತೋಷದ ಸಂಗತಿ.
|
|
| |
|
|
|
|
|
|
|
|
|